Adi Shankaracharyaಮನವಿ

ಸಹೃದಯಿ ಹವ್ಯಕ ಸಮಾಜ ಬಂಧುಗಳೇ,

ಒಂದು ಹೆಜ್ಜೆಯಿಂದಲೇ ಸಹಸ್ರ ಮೈಲುಗಳ ದೂರದ ಪ್ರಯಾಣ ಆರಂಭವಾಗುತ್ತದೆಯಂತೆ. ಹಾಗೆಯೇ ಬೆರಳೆಣಿಕೆಯಷ್ಟು ಸಮಾನ ಚಿಂತನೆ ಹೊಂದಿದ ಸೇವಾ ಬಿಂದುಗಳು ಯಾವುದೇ ಪ್ರಾಂತ್ಯ, ಭಾಷೆ ಹಾಗೂ ಯಾವುದೇ ಮಠದ ಶಿಷ್ಯ ಭಕ್ತ ಅನುಯಾಯಿಗಳು ಎಂಬ ಬೇಧಭಾವವಿಲ್ಲದ ಸಂಸ್ಥೆಯಾಗಿ 1942ರಲ್ಲಿ “ಅಖಿಲ ಹವ್ಯಕ ಮಹಾಸಭಾ”ಎಂಬ ಹವ್ಯಕ ಸಮುದಾಯದ ಸಂಘಟನಾ ಶಕ್ತಿಯ ಕೇಂದ್ರ ಸಂಸ್ಥೆಯನ್ನು ಆರಂಭಿಸಿದರು.

ಈ ಸಂಸ್ಥೆ ವಿಶಾಲವಾಗಿ ತೆರೆದುಕೊಂಡು ಸಾಂಸ್ಕøತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇತರ ವೈವಿಧ್ಯಮಯ ಸಮಾಜಮುಖೀ ಚಟುವಟಿಕೆಗಳಿಂದ ಸಮುದಾಯವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈ ಸಂಸ್ಥೆಯ ಸದಸ್ಯರಾಗಿ, ದಾನಿಗಳಾಗಿ, ಯೋಗದಾನಿಗಳಾಗಿ, ಹಿತೈಷಿಗಳಾಗಿ ಅದರ ಯಶಸ್ಸಿನ ಹಿಂದೆ ತಮ್ಮೆಲ್ಲರ ಸಹಕಾರ-ಸಹಾನುಭೂತಿ ಅಭಿನಂದನೀಯ. ಇದಕ್ಕೂ ಮುಂದುವರೆದು ಇನ್ನು ಮುಂದೂ ಅಖಿಲ ಹವ್ಯಕ ಮಹಾಸಭೆಯ ಬೆಳವಣಿಗೆಯಲ್ಲಿ ನಮ್ಮ ನಿಮ್ಮೆಲ್ಲರ ಸಕ್ರಿಯ ಪಾತ್ರ ಮುಂದುವರೆಯಬೇಕೆಂಬುದು ನಮ್ಮೆಲ್ಲರ ಆಶಯ. ಇದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಿದ್ದರೆ ಈ ಮೇಲಿನ ತಲೆಬರಹದಲ್ಲಿರುವಂತೆ “ಅಖಿಲ ಹವ್ಯಕ ಒಕ್ಕೂಟ” ಎಂಬ ಸಂಸ್ಥೆ ಯಾಕೆ?

1942ರಿಂದ 2016ರ ಡಿಸೆಂಬರ್ ವರೆಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸ್ವತಂತ್ರ ಸಂಸ್ಥೆಯಾಗಿ ನಡೆದುಕೊಂಡು ಬಂದಿದ್ದು ಇತಿಹಾಸ. ಈ ಸಂಸ್ಥೆಯ ಸ್ಥಾಪನೆಯಲ್ಲಿ ಹಾಗೂ ನಡೆದುಬಂದ ದಾರಿಯಲ್ಲಿ ಯಾವುದೇ ಮಠಮಾನ್ಯಗಳ/ಪೀಠಾಧಿಪತಿಗಳ ಆಡಳಿತಾತ್ಮಕ ಹಸ್ತಕ್ಷೇಪವಿರಲಿಲ್ಲ. ಅಖಿಲ ಹವ್ಯಕ ಮಹಾಸಭೆಯನ್ನು ಆಸ್ತಿಕ-ನಾಸ್ತಿಕ ಪ್ರವೃತ್ತಿಯವರೇ ಅಲ್ಲದೇ ಶ್ರೀಕ್ಷೇತ್ರ ವರದಹಳ್ಳಿ ಭಗವಾನ್ ಸದ್ಗುರು ಶ್ರೀಧರರ ಅನುಯಾಯಿಗಳು ಮತ್ತು ಶ್ರೀ ರಾಮಚಂದ್ರಾಪುರಮಠ/ಶ್ರೀ ಸ್ವರ್ಣವಲ್ಲೀಮಠ/ಶ್ರೀ ನೆಲಮಾವು ಮಠ ಇವುಗಳ ಶಿಷ್ಯರು ಹಾಗೂ ವಿವಿಧ ನಂಬಿಕೆಗಳನ್ನೊಳಗೊಂಡ ಸಮಾಜ ಬಂಧುಗಳು ಪ್ರತ್ಯೇಕತೆಯಲ್ಲಿಯೂ ಏಕತೆಯನ್ನು ಮೆರೆದು ಬೆಳೆಸಿ ಪೋಷಿಸಿಕೊಂಡು ಬಂದಿರುವರು.

ಅಖಿಲ ಹವ್ಯಕ ಮಹಾಸಭೆಯ ಆಡಳಿತ ಮಂಡಳಿಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯವಿದ್ದಾಗ್ಯೂ ಅಖಿಲ ಹವ್ಯಕ ಎಂಬ ಏಕೈಕ ಭಾವನೆಯಿಂದ ತಮ್ಮ ಸೇವೆ ಹಾಗೂ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ.

ಆದರೆ ಶ್ರೀ ರಾಮಚಂದ್ರಾಪುರ ಮಠದ ಈಗಿನ ಪೀಠಾಧಿಪತಿಗಳ ವಿಚಾರದಲ್ಲಿ ಆಗಿರುವ ಇತ್ತೀಚಿನ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಶ್ರೀ ಮಠದ ಕೆಲವು ಅನುಯಾಯಿಗಳು ಹಾಗೂ ಮಠ ಹಾಗೂ ಶ್ರೀಗಳ ಆಪ್ತವಲಯದಲ್ಲಿದ್ದವರು ಅವರುಗಳ ನಂಬಿಕೆ, ಆತ್ಮಸಾಕ್ಷಿ ಹಾಗೂ ಅನಿವಾರ್ಯತೆಯಿಂದ ಈಗಿನ ಪೀಠಾಧಿಪತಿಗಳ (ಮಠ ಅಥವಾ ಶ್ರೀ ಶಂಕರಾಚಾರ್ಯ ಪೀಠಪರಂಪರೆಯಿಂದಲ್ಲ)ಸಂಪರ್ಕದಿಂದ ದೂರ ಉಳಿಯುವ ಸನ್ನಿವೇಶ ಉಂಟಾಯಿತು. ಅಂತಹವರಲ್ಲಿ ಕೆಲವರು ಶ್ರೀ ಅಖಿಲ ಹವ್ಯಕ ಮಹಾಸಭೆಯನ್ನು ಮುನ್ನಡೆಸುವಲ್ಲಿ ಮತ್ತು ಅದರ ಹಲವು ರಚನಾತ್ಮಕ ಯೋಜನೆಗಳ ಯಶಸ್ಸಿಗೆ ಮುಂದಾಗಿದ್ದವರೂ ಆಗಿದ್ದರು. ಅದೇನೋ ಏಕೋ ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳ ಕುರಿತಾಗಿ ಸೊಲ್ಲೆತ್ತಿದ ಕೆಲವರನ್ನು ಸಮುದಾಯದ ಚಟುವಟಿಕೆಗಳಿಂದ ಬಹಿಷ್ಕರಿಸಬೇಕೆಂಬ ಹಿಡನ್ ಅಜೆಂಡಾ ಇಟ್ಟುಕೊಂಡು ಕೆಲವು ಹಿತಾಸಕ್ತಿಗಳು ಕಾರ್ಯಪ್ರವೃತ್ತರಾದರು.

ಏನೇ ಇರಲಿ ಶ್ರೀ ರಾಮಚಂದ್ರಾಪುರ ಮಠದ ಅನುಯಾಯಿಗಳು ಹಾಗೂ ಶ್ರೀ ಗುರುಗಳ ಆಪ್ತವಲಯದಲ್ಲಿರುವ ಕೆಲವರು ಮತ್ತು ಇತರ ಹವ್ಯಕ ಅಭಿಮಾನಿ ಸದಸ್ಯ ಬಂಧುಗಳ/ಪಧಾಧಿಕಾರಿಗಳ ಮುಂದಾಳತ್ವದಲ್ಲಿ ಮಲ್ಲೇಶ್ವರಂನಲ್ಲಿರುವ ಶಿಥಿಲವಾದ ಕಟ್ಟಡವನ್ನು ನೆಲಸಮಗೊಳಿಸಿ ಹಲವು ದಶಕಗಳ ನಂತರ ಸುಮಾರು ಏಳು ಕೋಟಿ ರೂ. ಅಂದಾಜು ವೆಚ್ಚದ ಒಂದು ಕಟ್ಟಡ ಸಮುಚ್ಛಯ ನಿರ್ಮಾಣ ಕಾರ್ಯವನ್ನು 2014ರಲ್ಲಿ ಕೈಗೆತ್ತಿಕೊಂಡು ಸುಮಾರು 75% ಕೆಲಸ ಮುಗಿಸಿ ಆ ಕಟ್ಟಡದ ಪ್ರವೇಶೋತ್ಸವ ಹಾಗೂ ಲೋಕಾರ್ಪಣಾ ಸಮಾರಂಭವು ಫೆಬ್ರವರಿ 2016ರಲ್ಲಿ ಏರ್ಪಟ್ಟಿತ್ತು.

ಕಟ್ಟಡ ನಿರ್ಮಾಣದಲ್ಲಿ ಮುಂದಾಳತ್ವವಹಿಸಿದವರ ನೇತೃತ್ವದಲ್ಲಿ ಪ್ರವೇಶೋತ್ಸವ ಹಾಗೂ ಲೋಕಾರ್ಪಣಾ ಸಮಾರಂಭವು ನಡೆಯಬಾರದೆಂಬ ಕೆಲವು ಹಿತಾಸಕ್ತಿಗಳ ಪಿತೂರಿಯು ಫಲಕಾರಿಯಾಗಲಿಲ್ಲ. ನಮ್ಮ ತಲೆಮಾರಿನಲ್ಲಿ ಒಮ್ಮೆ ದೊರೆಯಬಹುದಾದ ಈ ಮೇಲಿನ ಅಭೂತಪೂರ್ವ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕರೆಕೊಟ್ಟರು. ಆದರೂ ಆ ಸಭೆ ಸಮಾರಂಭಗಳೆಲ್ಲವೂ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅವಿಸ್ಮರಣೀಯವಾಗಿ ನಡೆದೇ ಹೋಯಿತು.

ಅಷ್ಟಕ್ಕೂ ಸಾಲದೇ ಪ್ರಜಾತಂತ್ರ ವ್ಯವಸ್ಥೆಗನುಗುಣವಾಗಿ ಮಾರ್ಚ 2016ರಲ್ಲಿ “ಶ್ರೀ ಅಖಿಲ ಹವ್ಯಕ ಮಹಾಸಭೆಗೆ” ಆಡಳಿತ ಮಂಡಳಿಯ ನಿರ್ದೇಶಕರ ಕೆಲ ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಯಿತು. ಅಂದಿನ ಚುನಾವಣೆಯಲ್ಲಿ ಅಖಿಲ ಹವ್ಯಕ ಮಹಾಸಭೆಯಲ್ಲಿ ಸುಮಾರು ಪ್ರತಿಶತ ಮುಕ್ಕಾಲು ಭಾಗದಷ್ಟು ಸದಸ್ಯ ಸಂಖ್ಯೆಯಿರುವ ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರಿಗೆ ಪರೋಕ್ಷವಾಗಿ ಶ್ರೀ ಗುರುಗಳ ಆಶಯ/ಆದೇಶ ಇದೆಯೆಂಬ ಸಂದೇಶ ರವಾನಿಸಿ ಶ್ರೀ ಮಠದಿಂದ ಪ್ರಾಯೋಜಿತರಾದ ಅಶೋಕೆ ಬಳಗದ ಅಭ್ಯರ್ಥಿಗಳನ್ನೇ ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಮಾಡಬೇಕೆಂಬ ಫರ್ಮಾನಿನಂತೆ “ಅಶೋಕೆ ಬಳಗದವರೇ” ಆಯ್ಕೆಯಾಗಿ ಅಖಿಲ ಹವ್ಯಕ ಮಹಾಸಭೆಯ ಆಡಳಿತ ಯಂತ್ರ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳವರ ಮಾರ್ಗದರ್ಶನ/ನಿರ್ದೇಶನದಂತೆ ನಡೆಯುವಂತೆ ಆಗುವಲ್ಲಿ ಯಶಸ್ವಿಯಾಯಿತು.

ವಿಪರ್ಯಾಸವೆಂದರೆ ಈ ಹಿಂದೆ ತಿಳಿಸಿದಂತೆ 7 ದಶಕಗಳ ನಂತರ ನಿರ್ಮಾಣಗೊಂಡ ಭವ್ಯ ಕಟ್ಟಡ ಸಮುಚ್ಚಯದ ಪ್ರವೇಶೋತ್ಸವ ಹಾಗೂ ಲೋಕಾರ್ಪಣಾ ಸಮಾರಂಭವನ್ನು ಬಹಿಷ್ಕಸಿದವರನೇಕರನ್ನು ಆಡಳಿತ ಮಂಡಳಿ ಮತ್ತು ಕಾರ್ಯಕಾರೀ ಸಮಿತಿಯ ಸದಸ್ಯರನ್ನಾಗಿ ಮತ್ತು ಆಹ್ವಾನಿತ ಸದಸ್ಯರನ್ನಾಗಿ ಹಾಗೂ ವಿವಿಧ ಸಮಿತಿಗಳ ಸಂಚಾಲಕರುಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಿನ ಪೀಠಾಧಿಪತಿಗಳ ಪೂರ್ವಾಶ್ರಮದ ಹತ್ತಿರದ ಸಂಬಂಧಿಯೋರ್ವರನ್ನು (ಚುನಾಯಿತ ನಿರ್ದೇಶಕರಾಗಿಲ್ಲದಿದ್ದರೂ ನಾಮ ನಿರ್ದೇಶನ ಮಾಡಿಕೊಂಡು) ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿಕೊಳ್ಳುವಲ್ಲಿಯೂ ಯಶಸ್ವಿಯಾದರು.

ಅಷ್ಟೂ ಸಾಲದೇ ಮುಂದೆಯೂ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ಶ್ರೀ ರಾಮಚಂದ್ರಾಪುರಮಠದ ಈಗಿನ ಪೀಠಾಧಿಪತಿಗಳಿಗೆ ನಿಷ್ಠರಾದ ಶಿಷ್ಯಕೂಟದ ನಿಯಂತ್ರಣ ತಪ್ಪದಂತೆ ಸದಸ್ಯತ್ವ ಮಹಾ ಅಭಿಯಾನ ಎಂಬ ಗುರಿಯೊಂದಿಗೆ ಕೇವಲ 500/-ರೂ ಪಡೆದು (ಆಜೀವ ಸದಸ್ತತ್ವ ಶುಲ್ಕ ರು. 400/-+ಪತ್ರಿಕಾ ನಿಧಿ ರೂ. 100/_ ಸೇರಿ) ಪಡೆದು ಸದಸ್ಯತ್ವ ನೋಂದಣಿ ಮಾಡುವ ದುರಾಲೋಚನೆಯ ತೀರ್ಮಾನವನ್ನು ಆಡಳಿತ ಮಂಡಳಿಯು ಕೈಗೊಂಡು ಕಾರ್ಯೋನ್ಮುಖವಾಗಿರುವುದನ್ನು ಗಮನಿಸಬಹುದು. ಕಾರಣ ಮುಂದಿನ ದಿನಗಳಲ್ಲಿ ನಡೆಯುವ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗಳಲ್ಲಿ ಶ್ರೀರಾಮಚಂದ್ರಾಪುರಮಠದ ಈಗಿನ ಪೀಠಾಧಿಪತಿಗಳಿಗೆ ನಿಷ್ಠರಾದ ಶಿಷ್ಯರೇ ಆಯ್ಕೆಯಾಗುವಂತೆ (ಚುನಾವಣಾ ಗಿಮಿಕ್) ನೋಡಿಕೊಳ್ಳಲು ಅನುಕೂಲವಾಗುವಂತೆ ಮಹಾಸಭೆಯ ಆರ್ಥಿಕ ಹಿತಾಸಕ್ತಿಯನ್ನೂ ಬದಿಗೊತ್ತಿ ಕಾರ್ಯಪ್ರವೃತ್ತರಾಗಿರುತ್ತಾರೆ. ಮಹಾಸಭೆಗೆ ಸದಸ್ಯತ್ವ ಚಂದಾ ಹಣ ಸಂಗ್ರಹವೇ ಪ್ರಮುಖ ಆರ್ಥಿಕ ಸಂಪನ್ಮೂಲವಾಗಿದ್ದು ಅದನ್ನು ಕಡೆಗಣಿಸಿದಂತಾಗಿದೆ.

ಇತ್ತೀಚಿನ ವರ್ಷಗಳವರೆಗೂ ಈ ಹಿಂದಿನ ಎಲ್ಲ ಆಡಳಿತ ಮಂಡಳಿಯವರೂ ಕೂಡ ನಡೆಸಿದ ಸದಸ್ಯತ್ವ ಅಭಿಯಾನಗಳಲ್ಲಿ ಕನಿಷ್ಠ ಪೋಷಕ ಸದಸ್ಯತ್ವ ಶುಲ್ಕ ರೂ. 1000/-ವನ್ನು ಸಂಗ್ರಹಿಸುತ್ತಾ ಬಂದಿದ್ದು ಅವರವರ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಮಹಾಪೋಷಕ ಸದಸ್ಯತ್ವ ರೂ. 2000/- ಮಹಾಪಾಲಕ ಸದಸ್ಯತ್ವ ಶುಲ್ಕ ರೂ.10000/-ದಂತೆ ಸಂಗ್ರಹಿಸಲಾಗುತ್ತಿತ್ತು. ಸಮಾಜ ಬಂಧುಗಳೂ ಕೂಡಾ ಮಹಾಸಭೆಯ ಮೇಲಿನ ಪ್ರೀತಿಯಿಂದ ಸ್ಪಂಧಿಸುತ್ತಿದ್ದುದನ್ನು ಸ್ಮರಿಸಲೇ ಬೇಕು.

ಹವ್ಯಕ ಮಾಸ ಪತ್ರಿಕೆ: ಹವ್ಯಕ ಪತ್ರಿಕೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಹವ್ಯಕ ಜನಪ್ರತಿನಿಧಿಗಳನ್ನು ಸಮಾಜಕ್ಕೆ ಪರಿಚಯಿಸುವುದಲ್ಲದೇ ಅವರಿಗೆ ಶುಭಾಶಯ ತಿಳಿಸುವ ಹಾಗೂ ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಸಚಿತ್ರ ವಿವರವನ್ನು ಹವ್ಯಕ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುವ ಹಾಗೂ ಅವರುಗಳಿಗೆ ಶುಭಾಶಯ ತಿಳಿಸುವ ವರದಿ ಹವ್ಯಕದಲ್ಲಿ ಪ್ರಕಟವಾಗುತ್ತಿರುವುದು ತಿಳಿದೇ ಇದೆ.

ಆದರೆ ಪ್ರಸ್ತುತ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗದ” ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ನಮ್ಮವರೇ ಆದ ಶ್ರೀ ಟಿ.ಶ್ಯಾಮ್ ಭಟ್ ಅವರ ಕುರಿತಾಗಿ ಅವರೊಂದಿಗಿನ ಸಂದರ್ಶನ ಲೇಖನವಾಗಲೀ ಅಥವಾ ಪರಿಚಯ ಲೇಖನವಾಗಲೀ ಪ್ರಕಟಿಸಿ, ಮಹಾಸಭೆಯು ಅವರಿಗೆ ಶುಭಾಶಯ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಅμÉ್ಟೀ ಏಕೆ ಭಾರತ ಸರ್ಕಾರವು ಘೋಷಿಸಿದ ಉನ್ನತ ಮಟ್ಟದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕೆಲವೇ ಜನರುಗಳಲ್ಲಿ ನಮ್ಮವರೇ ಆದ ಚ.ಮು.ಕೃಷ್ಣ ಶಾಸ್ತ್ರಿಗಳಿಗೆ ಸಂದ ಪದ್ಮಶ್ರೀ ಪ್ರಶಸ್ತಿಯ ಕುರಿತಾಗಿಯೂ ಈ ವರೆಗೂ ಹವ್ಯಕ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಹವ್ಯಕ ಸಮಾಜಕ್ಕೆ ಚಿಟ್ಟಾಣಿಯವರ ನಂತರ ಸಂದ ಪದ್ಮಶ್ರೀ ಪ್ರಶಸ್ತಿ ಇದಾಗಿದೆ. ಇನ್ನೂ ಮುಂದುವರೆದು ತಿಳಿಸಬಯಸುವುದೇನೆಂದರೆ ಹವ್ಯಕ ಸಂಘ (ರಿ) ಶಿವಮೊಗ್ಗ ಇವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಸಮಾಜಮುಖೀ ಕಾರ್ಯಗಳಲ್ಲೊಂದಾದ ಹವ್ಯಕ ಮಹಿಳಾ ವಿದ್ಯಾರ್ಥಿನಿಲಯ” ನಿರ್ಮಿಸಿ ಲೋಕಾರ್ಪಣೆಗೊಂಡಿದ್ದರ ಸಚಿತ್ರ ವರದಿ ಮಹಾಸಭೆಗೆ ತಲುಪಿದ್ದಾಗಿಯೂ ಇದೂ ಪ್ರಕಟಗೊಳ್ಳಲಿಲ್ಲ. ಇವುಗಳ ಹಿಂದಿನ ಷಢ್ಯಂತ್ರವೇನೆಂಬುದನ್ನು ನೀವೇ ಯೋಚಿಸಬೇಕು.

ಆದರೆ ಇಂದು ಒಂದು ಮಠದ ಪೀಠಾಧಿಪತಿಗಳು ಶ್ರೀ ಅಖಿಲ ಹವ್ಯಕ ಮಹಾಸಭೆಯನ್ನು ಹತೋಟಿಗೆ ತೆಗೆದುಕೊಂಡಿದ್ಧಾರೆ ಮಾತ್ರವಲ್ಲ ದಶಕಗಳ ಕಾಲ ಸಮಾಜ ಹಾಗೂ ಮಹಾಸಭಾಕ್ಕೆ ತನುಮನಧನ ಅರ್ಪಿಸಿದವರನ್ನು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲೋಸುಗ ಅಖಿಲ ಹವ್ಯಕ ಮಹಾಸಭಾದಿಂದ ದೂರ ಇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀ ರಾಮಚಂದ್ರಾಪುರಮಠದ ಅಂಗವಾದ “ಹವ್ಯಕ ಮಹಾಮಂಡಲದಲ್ಲಿ” ಶ್ರೀ ಅಖಿಲ ಹವ್ಯಕ ಮಹಾಸಭೆಯನ್ನು ವಿಲೀನಗೊಳಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಅನುಮಾನಕ್ಕೆ ಜೀವಂತ ಉದಾಹರಣೆಯನ್ನು ಹೇಳಬೇಕೆಂದರೆ ಬೆಳ್ತಂಗಡಿ ತಾಲ್ಲೂಕಾ ಹವ್ಯಕ ಸಭಾಗೆ ಸೇರಿದ ನಮ್ಮ ಮನೆ” ಕಟ್ಟಡ ಸಮುಚ್ಚಯದ ಆಡಳಿತ ವ್ಯವಸ್ಥೆಯನ್ನು ಗಮನಿಸಬಹುದಾಗಿದೆ.

ಗಿರಿನಗರದಲ್ಲಿ ವಿಶ್ವಭಾರತೀ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಬಿ.ಕೃಷ್ಣ ಭಟ್ ರವರು ಮಹಾಸಭೆಗೆ ಉಚಿತವಾಗಿ ಒಂದು ನಿವೇಶನವನ್ನು ನೀಡಿದ್ದು ಅಲ್ಲಿ ಮಹಾಸಭೆಯವತಿಯಿಂದ ನಿರ್ಮಾಣಗೊಂಡ ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಹವ್ಯಕ ಮಹಿಳಾ ವಸತಿಗೃಹವು ನಡೆದುಕೊಂಡು ಬರುತ್ತಿದೆ. ಇದಕ್ಕೆ ವಿದ್ವಾನ್ ಗಜಾನನ ಜೋಶಿ ಗೋಕರ್ಣ ಇವರು ಆ ಕಾಲದಲ್ಲಿ ಹತ್ತು ಲಕ್ಷ ರೂಗಳಿಗೂ ಮೀರಿದ ದೇಣಿಗೆಯನ್ನು ನೀಡಿ ಶ್ರೀ ರಾಮಚಂದ್ರಾಪುರಮಠದ ಈ ಹಿಂದಿನ ಪೀಠಾಧಿಪತಿಗಳಾದ ಶ್ರೀ ರಾಘವೇಂದ್ರಭಾರತೀ ಸ್ವಾಮಿಗಳವರ ಹೆಸರಿನಲ್ಲಿ ಆ ವಿದ್ಯಾರ್ಥಿನಿಲಯ ನಡೆದುಕೊಂಡು ಬರಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಅದರಂತೆ ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಹವ್ಯಕ ಮಹಿಳಾ ವಸತಿಗೃಹ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಶ್ರೀ ರಾಮಚಂದ್ರಾಪುರಮಠದ ಈ ಹಿಂದಿನ ಶ್ರೀಗಳ ಹೆಸರಿನಲ್ಲಿರುವುದನ್ನು ಉಲ್ಲೇಖಿಸಿ ಈಗಿನ ಪೀಠಾಧಿಪತಿಗಳು ಇದನ್ನು ಮಠದ ಸ್ವತ್ತೆಂದು ಸಮಾಜದಲ್ಲಿ ಗೊಂದಲ ಮೂಡಿಸಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನೂ ಕಡೆಗಣಿಸುವಂತಿಲ್ಲ. ಇದಕ್ಕೆ ಜೀವಂತ ಸಾಕ್ಷಿ ಎಂದರೆ ಶ್ರೀ ಬಿ.ಕೃಷ್ಣ ಭಟ್ ರವರು ಮತ್ತು ಭಕ್ತಾದಿಗಳು ನಿರ್ಮಿಸಿ ನಡೆಸಿಕೊಂಡು ಬರುತ್ತಿದ್ದ ಗಿರಿನಗರದಲ್ಲಿ ಇರುವ ಶ್ರೀ ಮಹಾಗಣಪತಿ ದೇವಸ್ಥಾನದ ಇಂದಿನ ಆಡಳಿತ.

ಶ್ರೀ ರಾಮಚಂದ್ರಾಪುರ ಮಠದ ಇಂದಿನ ಪೀಠಾಧಿಪತಿಗಳ ರಜೋಬಲದಿಂದ ಮಠ ಮತ್ತು ಶ್ರೀ ಅಖಿಲ ಹವ್ಯಕ ಮಹಾಸಭೆಯನ್ನು ದುರ್ಭಳಿಕೆ ಮಾಡಿಕೊಳ್ಳದಂತೆ ತಡೆಯಲೇಬೇಕಾದ ಗುರುತರವಾದ ಹೊಣೆ ಸಮಾಜದ ಮೇಲಿದೆ. ಈ ನಿಟ್ಟಿನಲ್ಲಿಯೂ ಅಖಿಲ ಹವ್ಯಕ ಒಕ್ಕೂಟ ಕಾರ್ಯಪ್ರವೃತ್ತವಾಗಲಿದೆ. ಅಖಿಲ ಹವ್ಯಕ ಒಕ್ಕೂಟವೂ ಕೂಡ ಗುರುಪೀಠ ಪರಂಪರೆಯನ್ನು ಪೂಜ್ಯಭಾವನೆಯಿಂದ ನೋಡುವುದೆಂಬುದರಲ್ಲಿ ಸಂಶಯವಿಲ್ಲ.

ಈ ವ್ಯವಸ್ಥೆಯನ್ನು ಸರಿಪಡಿಸಿ “ಶ್ರೀ ಅಖಿಲ ಹವ್ಯಕ ಮಹಾಸಭೆಯು” ಯಾವುದೇ ಮಠಮಾನ್ಯಗಳ ನಿಯಂತ್ರಣದಿಂದ ಸಾಗದೇ ಆಂತರಿಕವಾಗಿ ಯಾವುದೇ ಒಂದು ವರ್ಗ/ಗುಂಪಿನವರಾಗಿ ಉಳಿಯದಂತೆ ಹಾಗೂ ಆ ಭಾವನೆ ಮೂಡದಂತೆ ಪರಸ್ಪರರಲ್ಲಿ ಆ ಮಠದ ಶಿಷ್ಯರು ಈ ಮಠದ ಶಿಷ್ಯರು ಎಂಬ ಮನೋಭಾವದಿಂದ ಮುಕ್ತಗೊಳ್ಳುವಂತೆ ಎಚ್ಚರಿಸುವ ಸಲುವಾಗಿ ಮತ್ತು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನಲೆಯಲ್ಲಿ ಒಂದು ಅಧಿಕೃತ ಸಾಂಘಿಕ ವ್ಯವಸ್ಥೆ ಬೇಕೆಂಬ ಆಶಯವನ್ನು ಹೊಂದಿ “ಅಖಿಲ ಹವ್ಯಕ ಒಕ್ಕೂಟ”ವೆಂಬ ಸಂಘಟನಾ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಇದು ಅಖಿಲ ಹವ್ಯಕ ಮಹಾಸಭೆಯನ್ನು ದುರ್ಬಲಗೊಳಿಸುವ ಶಕ್ತಿಕೇಂದ್ರವಲ್ಲವೆಂಬುದನ್ನು ಪುನಃ ತಿಳಿಸಬಯಸುತ್ತೇವೆ.

ಈ ಮೇಲ್ಕಂಡ ಸನ್ನಿವೇಶದ ಹಿನ್ನಲೆಯಲ್ಲಿ ಸ್ಥಾಪಿತವಾದ ಅಖಿಲ ಹವ್ಯಕ ಒಕ್ಕೂಟದ ಉದ್ದೇಶ ಹಾಗೂ ನೀತಿ ನಿಯಮ ಹಾಗೂ ರೂಪುರೇಷಗಳೂ ಕೂಡ ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಸಮಾನವಾದುದೇ ಆಗಿದೆ. ಸಮಾಜದ ಒಳಿತಿಗಾಗಿ ಎಷ್ಟೇ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸಿದಲ್ಲಿ ಅದೇನೂ ಅಪರಾಧವಾಗದು ಹಾಗೂ ಅಸಾಂವಿಧಾನಿಕವೂ ಆಗದು.

ಆದ್ದರಿಂದ ಈ ಮೇಲೆ ತಿಳಿಸಿದ ವಾಸ್ತವ ಸ್ಥಿತಿಗತಿಗಳನ್ನು ಅರ್ಥೈಸಿಕೊಂಡು ಅಖಿಲ ಹವ್ಯಕ ಒಕ್ಕೂಟದಲ್ಲಿ ತಮ್ಮ ಸಹಭಾಗಿತ್ವ ಇರಲು ಬಯಸಿದಲ್ಲಿ ಅಖಿಲ ಹವ್ಯಕ ಒಕ್ಕೂಟದ ಸದಸ್ಯರಾಗಲು ಭಿನ್ನವಿಸಿಕೊಳ್ಳುತ್ತೇವೆ.